ಶ್ರೀನಿವಾಸನ್, ಕಸ್ತೂರಿ
	1887-1959. ಆಂಗ್ಲ ದೈನಿಕ ದಿ ಹಿಂದೂ ಪತ್ರಿಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಿದ ಶ್ರೇಷ್ಠ ಪತ್ರಿಕೋದ್ಯಮಿ. ತಮಿಳುನಾಡಿನ ಕೊಯಮತ್ತೂರಿನಲ್ಲಿ 1887 ಆಗಸ್ಟ್ 7ರಂದು ಜನಿಸಿದರು. ತಂದೆ ಕಸ್ತೂರಿ ರಂಗ ಐಯ್ಯಂಗಾರ್(ನೋಡಿ) ಹೆಸರಾಂತ ನ್ಯಾಯವಾದಿ ಮತ್ತು ದಿ ಹಿಂದೂ ದೈನಿಕದ ಮಾಲೀಕರಾಗಿದ್ದರು. ತಾಯಿ ಕನಕಮ್ಮಾಳ್. ಇವರು ಕುಂಭಕೋಣಮ್‍ನ ಕವಲ್‍ಕುಳೈ ಹಳ್ಳಿಯವರು. ಶ್ರೀನಿವಾಸನ್ ಅವರು ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಿಂದ ಪದವಿ ಪಡೆದರು. ತರುವಾಯ ತಂದೆಯ ಸಲಹೆ ಮೇರೆಗೆ ಹಿಂದೂ ಪತ್ರಿಕೆ ಸೇರಿದರು (1919). ತಂದೆಯ ಮರಣಾನಂತರ ತಮ್ಮ ಸಹೋದರ ಕಸ್ತೂರಿ ಗೋಪಾಲರತ್ನಮ್ ಅವರೊಡನೆ ಹಿಂದೂ ಪತ್ರಿಕೆಯ ವ್ಯವಸ್ಥಾಪಕ ಆಡಳಿತವನ್ನು ವಹಿಸಿಕೊಂಡರು (1923). ಶ್ರೀನಿವಾಸನ್‍ರ ಪತ್ನಿ ಶ್ರೀಮತಿ ಕೋಮಲಮ್ಮಾಳ್. ಎಸ್.ರಂಗರಾಜನ್ ಮತ್ತು ಎಸ್.ಪಾರ್ಥಸಾರಥಿ ಇವರ ಮಕ್ಕಳು. ಹಿಂದೂ ಪತ್ರಿಕೆಯ ಸಂಪಾದಕರಾಗಿದ್ದ ಇವರ ಚಿಕ್ಕಪ್ಪ ಎ.ರಂಗಸ್ವಾಮಿ ಐಯ್ಯಂಗಾರ್ ಅವರು ನಿಧನಹೊಂದಿದ ಅನಂತರ ಇವರು ಪತ್ರಿಕೆಯ ಸಂಪಾದಕರಾದರು (1934). 1934-59ರವರೆಗೆ ಸು. 25 ವರ್ಷಗಳವರೆಗೆ ಈ ಪತ್ರಿಕೆಯ ಸಂಪಾದಕತ್ವ ನಿರ್ವಹಿಸಿದ ಕೀರ್ತಿಗೆ ಪಾತ್ರರಾದರು.

	ಇವರ ಸಂಪಾದಕತ್ವದಲ್ಲಿ ಹಿಂದೂ ಪತ್ರಿಕೆ ಸ್ವರ್ಣಯುಗವನ್ನು ಕಂಡಿತು. ಪತ್ರಿಕೆಯನ್ನು ಉನ್ನತ ಶ್ರೇಣಿಗೆ ತರಲು ಇವರು ಅಹರ್ನಿಶಿ ಶ್ರಮಿಸಿದರು. ಆಧುನಿಕ ಮುದ್ರಣ ತಂತ್ರಜ್ಞಾನವನ್ನು ಪತ್ರಿಕೆಗೆ ಅಳವಡಿಸಿದರು. ಈ ಪತ್ರಿಕೆಯನ್ನು ಪ್ರಪಂಚದ ಶ್ರೇಷ್ಠ ಪತ್ರಿಕೆಯಾದ ಲಂಡನ್ ಟೈಮ್ಸ್‍ಗೆ ಆಗ ಹೋಲಿಸಲಾಗುತ್ತಿತ್ತು. ಬ್ರಿಟಿಷ್ ಸರ್ಕಾರದ ವಿರುದ್ಧ ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ಇವರು ನಿರಂತರವಾಗಿ ಹೋರಾಟ ನಡೆಸಿದರು. ಅಖಿಲ ಭಾರತ ಪತ್ರಿಕಾ ಸಂಪಾದಕರ ಸಮ್ಮೇಳನದ ನೇತೃತ್ವವನ್ನು ವಹಿಸಿಕೊಂಡರು. 1940-44ರ ವರೆಗೆ ಅಖಿಲ ಭಾರತ ಪತ್ರಿಕಾ ಸಂಪಾದಕರ ಅಧ್ಯಕ್ಷರಾಗಿ ದುಡಿದರು. ಬ್ರಿಟಿಷ್ ಸರಕಾರದ ಪತ್ರಿಕಾ ದಮನ ನೀತಿಯನ್ನು ವಿರೋಧಿಸಿ ರಾಷ್ಟ್ರವ್ಯಾಪಿ ಚಳವಳಿ ನಡೆಸಿ ಪತ್ರಿಕೆಯನ್ನು ಒಂದು ದಿನ ಪ್ರಕಟಿಸದೆ ಪ್ರತಿಭಟಿಸಿದರು. ಇವರು ಭಾರತೀಯ ವೃತ್ತ ಪತ್ರಿಕೆಗಳ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು (1947). ಸ್ವಾತಂತ್ರ್ಯಾನಂತರ ಭಾರತೀಯ ಪತ್ರಿಕೆಗಳಿಗೆ ತಮ್ಮದೇ ಸುದ್ದಿಸಂಸ್ಥೆ ತಂದುಕೊಟ್ಟ ಕೀರ್ತಿ ಇವರದು. 1948-51ರವರೆಗೆ ಭಾರತದ ಪ್ರಥಮ ಸುದ್ದಿ ಸಂಸ್ಥೆ ಪಿ.ಟಿ.ಐ (ಪ್ರೆಸ್ ಟ್ರಸ್ಟ್ ಆಫ್ ಇಂಡಿಯ)ದ ಸ್ಥಾಪನೆಯಲ್ಲಿ ಮಹತ್ತರ ಪಾತ್ರವಹಿಸಿ ಅದರ ಪ್ರಥಮ ಅಧ್ಯಕ್ಷರಾಗಿ ಸೇವೆಸಲ್ಲಿಸಿದರು. ಅನಂತರ ಅಂತಾರಾಷ್ಟ್ರೀಯ ಪತ್ರಿಕಾ ಸಂಘದ ಉಪಾಧ್ಯಕ್ಷರಾದರು (1952). ಸಂಗೀತದ ಬಗ್ಗೆ ಆಸಕ್ತಿಇದ್ದ ಇವರು ಮದರಾಸಿನ ಪ್ರತಿಷ್ಠಿತ ಸಂಗೀತ ಅಕಾಡೆಮಿಯನ್ನು ಸ್ಥಾಪಿಸಿದರು. ಇವರ ಸೇವೆಗೆ ಅನೇಕ ಪ್ರಶಸ್ತಿಗಳು ಸಂದಿವೆ. ಭಾರತ ಸರ್ಕಾರ ಇವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ (1956). ಇವರು 1959 ಜೂನ್ 22ರಂದು ನಿಧನರಾದರು.			
				(ಯು.ಆರ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ